ಪ್ರಸಾದ್, ರಾಜೇಂದ್ರ
 	1884-1963. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ, ಶ್ರೇಷ್ಠ ನ್ಯಾಯವಾದಿ, ಶಿಕ್ಷಣಶಾಸ್ತ್ರಜ್ಞ, ರಾಜಕಾರಣಿ, ಮಹಾನ್ ಗಾಂಧಿವಾದಿ, ದೇಶಭಕ್ತ, ಸ್ವಾತಂತ್ರ್ಯಯೋಧ. ರಾಜೇಂದ್ರ ಪ್ರಸಾದರು ಬಿಹಾರ ರಾಜ್ಯದ ಸರಣ್ ಜಿಲ್ಲೆಯ ಜೀರಾದೇಯಿ ಗ್ರಾಮದ ರೈತ ಕುಟುಂಬವೊಂದರಲ್ಲಿ 1884ರ ಡಿಸೆಂಬರ್ 3ರಂದು ಜನಿಸಿದರು. ಅವರದು ಕಾಯಸ್ಥ ಮನೆತನ. ಅವರ ತಂದೆ ಮಹಾದೇವ ಸಹಾಯ್, ತಾಯಿ ಕಮಲೇಶ್ವರಿ ದೇವಿ. ರಾಜೇಂದ್ರಪ್ರಸಾದರು ಆ ದಂಪತಿಗಳ ಐದನೆಯ ಮತ್ತು ಕೊನೆಯ ಸಂತಾನ. ರಾಜೇಂದ್ರರ ತಾತನ ಸೋದರ ಚೌಧುರ್ ಲಾಲರು ಒಂದು ಸಣ್ಣ ಸಂಸ್ಥಾನದ ದಿವಾನರಾಗಿದ್ದರು. ಅವರು ಒಂದು ಜಮೀನ್ದಾರಿಯನ್ನು ಸಂಪಾದಿಸಿಕೊಂಡಿದ್ದರು. ರಾಜೇಂದ್ರರ ತಂದೆ ಪರ್ಶಿಯನ್ ಮತ್ತು ಸಂಸ್ಕøತಿ ಭಾಷೆಗಳಲ್ಲಿ ಪರಿಣತರಾಗಿದ್ದರು, ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಗಳಲ್ಲಿ ಅವರಿಗೆ ಆಸಕ್ತಿಯಿತ್ತು. ರಾಜೇಂದ್ರರು ಐದಾರು ವರ್ಷದವರಾಗಿದ್ದಾಗ ಅವರಿಗೆ ಮೌಲ್ವಿಗಳಿಂದ ಪರ್ಶಿಯನ್ ಭಾಷೆಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು. ತಾಯಿ ಅವರಿಗೆ ರಾಮಾಯಣದ ಕಥೆಗಳನ್ನು ಹೇಳುತ್ತಿದ್ದರು. ಅನಂತರ ರಾಜೇಂದ್ರ ಪ್ರಸಾದರು ಹಿಂದಿ ಮತ್ತು ಗಣಿತ ಕಲಿತರು. ಉಪನಿಷತ್ತು ಹಾಗೂ ಇತರೆ ಸನಾತನಶಾಸ್ತ್ರಗಳನ್ನೂ ಅಭ್ಯಾಸ ಮಾಡಿದರು. ಅವರು ಛಾಪ್ರ ಜಿಲ್ಲಾಶಾಲೆ ಸೇರಿದರು. ಆ ಮೇಲೆ ಅವರು ಅನುಕ್ರಮವಾಗಿ ಪಟ್ನಾದಲ್ಲಿ ಟಿ. ಕೆ. ಘೋಷ್ ಅಕಾಡೆಮಿಯಲ್ಲೂ ಹಾತುವಾ ಪ್ರೌಢಶಾಲೆಯಲ್ಲೂ ಮತ್ತೆ ಛಾಪ್ರ ಜಿಲ್ಲಾ ಶಾಲೆಯಲ್ಲೂ ಶಿಕ್ಷಣ ಮುಂದುವರಿಸಿದರು. ಅವರ ವಯಸ್ಸು 18 ಆಗಿದ್ದಾಗ 1902ರಲ್ಲಿ ಅವರು ಕಲ್ಕತ್ತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪ್ರಥಮರಾಗಿ ಉತ್ತೀರ್ಣರಾದರು. ಮೊದಲೇ ಎಂದರೆ 13ನೆಯ ವಯಸ್ಸಿನಲ್ಲಿ ರಾಜಬಂಶಿ ದೇವಿಯವರೊಂದಿಗೆ ಅವರು ವಿವಾಹ ಆಗಿತ್ತು. ವಿದ್ಯಾಭ್ಯಾಸದ ಉದ್ದಕ್ಕೂ ಅವರು ಪ್ರಥಮ ದರ್ಜೆಯಲ್ಲಿ ಪ್ರಥಮರಾಗಿ ಉತ್ತೀರ್ಣರಾಗುತ್ತಿದ್ದರು. ಕಲ್ಕತ್ತದಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರು 1906ರಲ್ಲಿ ಬಿಹಾರಿ ವಿದ್ಯಾರ್ಥಿಗಳ ಸಮ್ಮೇಳನವೊಂದನ್ನು ಯಶಸ್ವಿಯಾಗಿ ನಡೆಸಿದರು. ಅದೇ ವರ್ಷ ಅಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ದುಡಿದರು. ಈ ಅಧಿವೇಶನದ ಅನಂತರ ಅವರು ಕಾಂಗ್ರೆಸ್ಸಿನತ್ತ ಆಕರ್ಷಿತರಾದರೂ ಅವರು ಅದನ್ನು ವಿಧಿವತ್ತಾಗಿ ಸೇರಿದ್ದು 1911ರಲ್ಲಿ. ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನಂತರ ಅವರು 1908ರಲ್ಲಿ ಮುಝಫರ್‍ಪುರ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇರಿ ಕೆಲವು ತಿಂಗಳುಗಳ ಕಾಲ ಕೆಲಸಮಾಡಿದರು. ಮುಂದೆ ಬಿ.ಎಲ್. ಪದವಿ ಗಳಿಸಿ 1911ರ ಆಗಸ್ಟ್‍ನಲ್ಲಿ ಕಲ್ಕತ್ತದಲ್ಲಿ ನ್ಯಾಯವಾದಿಯಾದರು. 1916ರಲ್ಲಿ ಪಟನಾ ಉಚ್ಚ ನ್ಯಾಯಾಲಯ ಸ್ಥಾಪಿತವಾದಾಗ ಆ ವೇಳೆಗಾಗಲೇ 1915ರಲ್ಲಿ ಎಂ. ಎಲ್. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮರಾಗಿ ತೇರ್ಗಡೆಹೊಂದಿದ್ದ ಅವರು ಪಟನಾಕ್ಕೆ ಹಿಂದಿರುಗಿ ಅಲ್ಲಿ ವಕೀಲಿ ಮುಂದುವರಿಸಿದರು. ಅವರಿಗಿದ್ದ ಅಪಾರ ಜ್ಞಾಪಕಶಕ್ತಿ ಮತ್ತು ಕಾನೂನು ಜ್ಞಾನಗಳು ಅವರಿಗೆ ವೃತ್ತಿಯಲ್ಲಿ ಯಶಸ್ಸು ದೊರೆಕಿಸಿಕೊಟ್ಟವು. ಅವರು ಉಳಿದ ನ್ಯಾಯಾವಾದಿಗಳ ಮತ್ತು ನ್ಯಾಯಾಧೀಶರ ಮೇಲೆ ತಮ್ಮ ವರ್ಚಸ್ಸನ್ನು ಬೀರಲು ಶಕ್ತರಾದರು. ಅವರ ವರಮಾನವೂ ಚೆನ್ನಾಗಿಯೇ ಇತ್ತು. ಆ ಮೊದಲು ಕಲ್ಕತ್ತದಲ್ಲಿದ್ದಾಗ ಅವರು ಸ್ವಲ್ಪಕಾಲ ನ್ಯಾಯಶಾಸ್ತ್ರ ಕಾಲೇಜಿನಲ್ಲಿ ಅಧ್ಯಾಪಕರಾಗಿಯೂ ಕೆಲಸಮಾಡಿದರು. 1916ರಲ್ಲಿ ಪಟನಾ ವಿಶ್ವವಿದ್ಯಾಲಯ ಸ್ಥಾಪಿತವಾದಾಗ ಅವರು ಅದರ ಸೆನೆಟಿನ ಸದಸ್ಯರಾದರು. ಮುಂದೆ ಸಿಂಡಿಕೇಟಿನ ಸದಸ್ಯತ್ವಕ್ಕೂ ಅವರ ಆಯ್ಕೆಯಾಯಿತು. 1911ರಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದ ಅವರು ಪಟ್ನಾಕ್ಕೆ ಬಂದ ಮೇಲೆ ಬಿಹಾರ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಸಹಾಯಕ ಕಾರ್ಯದರ್ಶಿಯಾಗಿ ಕೆಲವು ವರ್ಷ ಕೆಲಸ ಮಾಡಿದರು. ಮುಂದೆ ಅಸಹಕಾರ ಆಂದೋಲನ ಪ್ರಾರಂಭವಾದ ಮೇಲೆ ಆ ಸಮಿತಿಯ ಕಾರ್ಯದರ್ಶಿಯಾದರು. ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾದ ಸಾರ್ವಜನಿಕ ನಾಯಕರನೇಕರಲ್ಲಿ ರಾಜೇಂದ್ರಪ್ರಸಾದರು ಒಬ್ಬರು. ಕಲ್ಕತ್ತೆಯಲ್ಲಿ 1915ರಲ್ಲಿ ಗಾಂಧೀಜಿಯವರ ಪ್ರಥಮ ಭೇಟಿ; ಆಮೇಲೆ 1917ರ ಏಪ್ರಿಲ್‍ನಲ್ಲಿ ಕಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ಇನ್ನಷ್ಟು ಸಮೀಪಕ್ಕೆ. ಚಂಪಾರಣ್‍ದ ನೀಲಿ ತೋಟಗಳಿಗೆ ಸಂಬಂಧಿಸಿದ ಆಂದೋಲನದಲ್ಲಿ ಗಾಂಧೀಜಿಯವರೊಡನೆ ಅವರು ಸಕ್ರಿಯವಾಗಿ ಭಾಗವಹಿಸಿದರು. ಅದು ಸಫಲವಾಗಿ ಕೊನೆಗೊಂಡಾಗ ಅವರಿಗೆ ಗಾಂಧೀಜಿಯವರಲ್ಲಿ ಅಪಾರ ಪ್ರೇಮವೂ ಅವರ ಕಾರ್ಯವಿಧಾನದಲ್ಲಿ ದೃಢವಿಶ್ವಾಸವೂ ಉಂಟಾಗಿ ಅವರು ಗಾಂಧೀಜಿಯವರ ಹುರುಪಿನ ಅನುಯಾಯಿಗಳೂ ಅವರ ಕಾರ್ಯವಿಧಾನದ ಉತ್ಸಾಹಿ ಪ್ರತಿಪಾದಕರೂ ಆದರು. ಗಾಂಧೀಜಿಯವರ ಪ್ರಭಾವದಿಂದಾಗಿ ಅವರ ದೃಷ್ಟಿಕೋನದಲ್ಲಿ, ಆಚಾರವಿಚಾರಗಳಲ್ಲಿ ಪೂರ್ಣ ಬದಲಾವಣೆಗಳಾದವು. ಚಂಪಾರಣ್ ಸತ್ಯಾಗ್ರಹದ ಕಾಲದಲ್ಲಿ ಸುಮಾರು 8-10 ತಿಂಗಳುಗಳ ಕಾಲ ಅವರು ನ್ಯಾಯವಾದಿಯು ವೃತ್ತಿಯನ್ನು ಬಿಟ್ಟುಕೊಟ್ಟಿದ್ದು ಅನಂತರ ಮತ್ತೆ ಅದನ್ನು ಪ್ರಾರಂಭಿಸಿದರು. ಬ್ರಿಟಿಷ್ ಸರ್ಕಾರದ ವಿಷಯದಲ್ಲಿ ಅವರು ಮೊದಲಿಗೆ ಮಧ್ಯಮ ಮಾರ್ಗಗಾಮಿಗಳಾಗಿದ್ದರು. ಆದರೆ ರೌಲತ್ ಅಧಿನಿಯಮದ ವಿರುದ್ಧ ದೇಶಾದ್ಯಂತ ಆಂದೋಲನ, ಜಲಿಯನ್ ವಾಲಾಬಾಗ್‍ನಲ್ಲಿ ನರಹತ್ಯೆ, ಪಂಜಾಬಿನಲ್ಲಿ ಬ್ರಿಟಿಷರ ದುರಾಡಳಿತ, ಖಿಲಾಫತ್ ಚಳವಳಿ ಮೊದಲಾದ ಘಟನೆಗಳಿಂದ ದೇಶದ ರಾಜಕೀಯದ ಗತಿಯಲ್ಲಿ ತೀವ್ರ ಬದಲಾವಣೆಯಾಯಿತು. ಪ್ರಸಾದರು ರಾಷ್ಟ್ರೀಯ ಆಂದೋಲನದಲ್ಲಿ ಪೂರ್ಣವಾಗಿ ಧುಮುಕಿದರು. ತಮಗೆ ಒಳ್ಳೆಯ ಸಂಪಾದನೆ ತರುತ್ತಿದ್ದ ವಕೀಲಿಯನ್ನು ಬಿಟ್ಟರು, ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯತ್ವಗಳಿಗೂ ರಾಜೀನಾಮೆ ನೀಡಿದರು. ತಮ್ಮ ಮಕ್ಕಳನ್ನು ವಿದ್ಯಾಸಂಸ್ಥೆಗಳಿಂದ ಬಿಡಿಸಿದರು. ದೇಶ್ ಮತ್ತು ಸರ್ಚ್‍ಲೈಟ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಅವರೂ ಅವರ ಗೆಳೆಯರೂ ಸೇರಿ ಪಟ್ನ-ಗಯಾ ಮಾರ್ಗದಲ್ಲಿ ಒಂದು ರಾಷ್ಟ್ರೀಯ ಕಾಲೇಜನ್ನು ತೆರೆದರು. ರಾಜೇಂದ್ರ ಪ್ರಸಾದರು ಅದರ ಪ್ರಿನ್ಸಿಪಾಲರಾದರು. ಗಾಂಧೀಜಿಯವರ ಸಲಹೆಯ ಮೇರೆಗೆ ಬಿಹಾರ ವಿದ್ಯಾಪೀಠದ ಸ್ಥಾಪನೆಯಾಯಿತು. ಅವರು ಬಿಹಾರಾದ್ಯಂತ ಪ್ರವಾಸ ಕೈಗೊಂಡು ಗಾಂಧೀಜಿಯವರ ವಿಚಾರಗಳನ್ನೂ ಕಾಂಗ್ರೆಸ್‍ನ ಕಾರ್ಯಕ್ರಮಗಳನ್ನೂ ತಮ್ಮ ಸಾರ್ವಜನಿಕ ಭಾಷಣಗಳ ಮೂಲಕ ಜನತೆಗೆ ತಿಳಿಸಿದರು. ಹಿಂದಿ ಮತ್ತು ಖಾದಿ ಪ್ರಚಾರಕ್ಕಾಗಿಯೂ ಅವರು ಬಹಳ ಶ್ರಮಿಸಿದರು. ಹಿಂದು-ಮುಸ್ಲಿಂ ಏಕತೆಗಾಗಿಯೂ ದುಡಿದರು. ಸಮಾಜದ ಪಿಡುಗುಗಳಲ್ಲೊಂದಾದ ವರದಕ್ಷಿಣೆ ಪದ್ಧತಿಯನ್ನು ತಡೆಯಲು ತೀವ್ರವಾಗಿ ಶ್ರಮಿಸಿದರು. ಹಿಂದುಳಿದಿದ್ದ ಬಿಹಾರ ಪ್ರಾಂತ್ಯದ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜುಗೊಂಡದ್ದು ವಿಶೇಷಾಗಿ ಅವರಿಂದಾಗಿ, ಅಲ್ಲಿಯ ನಿಮ್ನವರ್ಗಗಳ ಜನರು ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲುವಂತಾದ್ದು ಅವರಿಂದಲೇ, ಗ್ರಾಮವಾಸಿಗಳ ಬಗ್ಗೆ ಅವರಿಗೆ ಆದರ, ವಾತ್ಸಲ್ಯ ಅಭಿಮಾನಗಳಿದ್ದುವು. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದ ರಾಜೇಂದ್ರರು ಕಷ್ಟ ನಷ್ಟ ನೋವುಗಳನ್ನು ಅನುಭವಿಸುವುದು ಅನಿವಾರ್ಯವಾಯಿತು. ಆದರೆ ಅವರು ಸ್ವಲ್ಪವೂ ಧೃತಿಗೆಡಲಿಲ್ಲ. ಅವರಿಗೆ ಅಪಾರವಾದ ತಾಳ್ಮೆಯಿತ್ತು. ಗೂರಲು ಬೇನೆ ಅವರನ್ನು ಸದಾ ಬಾಧಿಸುತ್ತಿತ್ತು. ಇಂಥ ವಿಪರೀತ ಪರಿಸ್ಥಿತಿಯಲ್ಲಿ ಅವರು ಅನೇಕ ಸಲ ಅನುಭವಿಸಿದ ಜೈಲುವಾಸ ಹೆಚ್ಚು ಕಷ್ಟದಾಯಕವಾಯಿತು. ಸೆರೆಮನೆಗೆ ಹೋಗಿ ಹಿಂದಿರುಗಿದಾಗಲೆಲ್ಲ ಅವರ ದೇಹಸ್ಥಿತಿ ದುರ್ಬಲವಾಗಿರುತ್ತಿತ್ತು. 1934ರ ಜನವರಿ 14ರಂದು ಬಿಹಾರದಲ್ಲಿ ಭೂಕಂಪ ಸಂಭವಿಸಿದಾಗ ಅವರು 15 ತಿಂಗಳ ಜೈಲು ಶಿಕ್ಷೆಯನ್ನನುಭವಿಸುತ್ತಿದ್ದರು. ಭೂಕಂಪ ಸಂಭವಿಸಿದ ಎರಡು ದಿನಗಳ ಅನಂತರ ಅವರ ಬಿಡುಗಡೆಯಾಯಿತು. ಆ ಸಮಯದಲ್ಲಿ ಅವರ ದೇಹಸ್ಥಿತಿ ಚಿಂತಾಜನಕವಾಗಿತ್ತು. ಆದರೂ ಅವರು ತಮ್ಮ ಆಯಾಸ ಅನಾರೋಗ್ಯಗಳನ್ನು ಲೆಕ್ಕಿಸದೆ ಭೂಕಂಪದಿಂದ ನೊಂದವರ ಸೇವೆಗೆ ನಿಂತರು. ಅನಂತರ ಬಿಹಾರ ನೆರೆಯ ಹಾವಳಿಗೆ ತುತ್ತಾಯಿತು. ಅಲ್ಲಿ ಹಲವು ಸಾಂಕ್ರಾಮಿಕ ರೋಗಗಳು ತಲೆದೋರಿದವು. ರಾಜೇಂದ್ರರ ಅಧ್ಯಕ್ಷತೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಭಾರತದ ಜನತೆಯಿಂದ ಅಪಾರ ಧನ ಮತ್ತು ಇತರ ಅವಶ್ಯಕ ವಸ್ತುಗಳ ಕಾಣಿಕೆಗಳನ್ನು ಸಂಗ್ರಹಿಸಲು ಶಕ್ತವಾಯಿತು. ಸಂತ್ರಸ್ತರಿಗೆ ಸಹಾಯವನ್ನು ಹಂಚುವ ಕೆಲಸವನ್ನು ಅದು ದಕ್ಷತೆಯಿಂದ ನಿರ್ವಹಿಸಿತು. ಅದರ ವ್ಯವಸ್ಥೆಯ ಬಗ್ಗೆ ಯಾವ ಅಪವಾದಕ್ಕೂ ಎಡೆಯಿರಲಿಲ್ಲ. ಅದರಲ್ಲಿ ರಾಜೇಂದ್ರ ಪ್ರಸಾದರ ಪಾತ್ರ ಮಹತ್ತ್ವದ್ದಾಗಿತ್ತು. ಇವರು ಸಂಗ್ರಹಿಸಿದ್ದು 38 ಲಕ್ಷ ರೂಪಾಯಿಗಳಿಗೂ ಹೆಚ್ಚಾದರೆ, ವೈಸ್‍ರಾಯರು ಇದರ ಮೂರನೇ ಒಂದು ಭಾಗವನ್ನೂ ಸಂಗ್ರಹಿಸಲು ಆಗಲಿಲ್ಲ. ರಾಜೇಂದ್ರ ಪ್ರಸಾದರು ಸಂಘಟಿಸಿದ ಪರಿಹಾರ ಕಾರ್ಯದ ದಕ್ಷತೆಯೂ ಅದೇ ರೀತಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

	1934ರಲ್ಲಿ ಮುಂಬಯಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ರಾಜೇಂದ್ರ ಪ್ರಸಾದರ ಆಯ್ಕೆಯಾಯಿತು. ಅವರು ಆ ವರ್ಷದ ಅಕ್ಟೋಬರಿನಿಂದ 1936ರ ಮಾರ್ಚ್‍ವರೆಗೆ ಆ ಸಂಸ್ಥೆಯ ಅಧ್ಯಕ್ಷಸ್ಥಾನದಲ್ಲಿದ್ದರು. ನಾಗಪುರದಲ್ಲಿ ಸೇರಿದ್ದ ಅಖಿಲ ಭಾರತ ಹಿಂದಿ ಸಾಹಿತ್ಯ ಸಮ್ಮೇಳನಕ್ಕೂ ಅವರು ಅಧ್ಯಕ್ಷರಾಗಿದ್ದರು. 1936ರಲ್ಲಿ ಅವರು ಬಿಹಾರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡರು. 1937ರಲ್ಲಿ ಪ್ರಾಂತೀಯ ಶಾಸನಸಭೆಗಳ ಚುನಾವಣೆಗಳ ನಡೆದುವು. ಅವರು ಅನೇಕ ಪ್ರಾಂತ್ಯಗಳಲ್ಲಿ ಪ್ರವಾಸ ಮಾಡಿ ಚುನಾವಣಾ ಪ್ರಚಾರ ಭಾಷಣಗಳನ್ನು ಮಾಡಿದರು. ಮುಂದೆ ರಾಜ್ಯಗಳಲ್ಲಿ ಕಾಂಗ್ರೆಸ್ ಮಂತ್ರಿ ಮಂಡಲಗಳು ಅಧಿಕಾರ ವಹಿಸಿಕೊಂಡುವು. ಚುನಾವಣೆಗಳಿಗೆ ಅಭ್ಯರ್ಥಿಗಳನ್ನೂ ಮಂತ್ರಿಮಂಡಲಗಳಿಗೆ ಸದಸ್ಯರನ್ನೂ ಆರಿಸುವ ಕೆಲಸ ಸುಲಭವಾಗಿರಲಿಲ್ಲ. ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಮಂತ್ರಿಮಂಡಲಗಳಿಗೆ ಯೋಗ್ಯ ಸಲಹೆಯ ಆವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಸರದಾರ್ ವಲ್ಲಭಭಾಯಿ ಪಟೇಲ್ ಮತ್ತು ಮೌಲಾನಾ ಅಜಾದರನ್ನು ಒಳಗೊಂಡ ಸಂಸದೀಯಮಂಡಲಿ ಯೋಗ್ಯ ಸಲಹೆ ನೀಡಿ, ಪರಿಸ್ಥಿತಿ ಎಲ್ಲೂ ಕೈಮೀರದಂತೆ ನೋಡಿಕೊಂಡಿತು. ಬಿಹಾರದಲ್ಲಿ ನಡೆದ ಕೋಮುವಾರು ಗಲಭೆಯನ್ನು ಶಾಂತಗೊಳಿಸಲು ರಾಜೇಂದ್ರರು ಬಹಳ ಶ್ರಮಿಸಿದರು. ಅವರು ಪ್ರಾಂತ್ಯದಲ್ಲೆಲ್ಲ ಸಂಚರಿಸಿ ಹಿಂದು ಮುಸ್ಲಿಂ ಮೈತ್ರಿಗಾಗಿ ದುಡಿದರು. 1939ರಲ್ಲಿ ಸುಭಾಷ್‍ಚಂದ್ರ ಬೋಸರು ಕಾಂಗ್ರೆಸ್ಸಿನ ಅಧ್ಯಕ್ಷ ಪದವಿಯನ್ನು ಬಿಟ್ಟಾಗ ರಾಜೇಂದ್ರರು ಮತ್ತೆ ಅಧ್ಯಕ್ಷತೆಯ ಹೊಣೆ ಹೊರಬೇಕಾಯಿತು. ಮುಂದೆ ಆಚಾರ್ಯ ಕೃಪಾಲನಿಯವರು ಕಾಂಗ್ರೆಸ್ ಅಧ್ಯಕ್ಷ ಪದವಿಗೆ ರಾಜೀನಾಮೆಯಿತ್ತಾಗಲೂ ಆ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಸಾದರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1942ರ ಆಗಸ್ಟ್ 8ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂಬ ಗೊತ್ತುವಳಿಯನ್ನು ಅಂಗೀಕರಿಸಿತು. ಸದಾಖತ್ ಆಶ್ರಯದಲ್ಲಿ ಅಸ್ವಸ್ಥರಾಗಿದ್ದ ರಾಜೇಂದ್ರ ಪ್ರಸಾದರನ್ನು ಮರುದಿನವೇ ಸೆರೆಹಿಡಿಯಲಾಯಿತು. 1945ರಲ್ಲಿ ಜೂನ್ 15ರ ವರೆಗೆ ಅವರು ಸೆರೆಮನೆಯಲ್ಲಿದ್ದರು. ಆ ಸಮಯದಲ್ಲಿ ಅವರು ಇಂಡಿಯ ಡಿವೈಡೆಡ್ ಎಂಬ ಗ್ರಂಥವನ್ನೂ ಆತ್ಮಕಥೆಯನ್ನೂ ಹೆಚ್ಚು ಕಡಿಮೆ ಪೂರ್ತಿಗೊಳಿಸಿದರು. ಇಂಡಿಯ ಡಿವೈಡೆಡ್ ಕೃತಿ 1946ರ ಜನವರಿಯಲ್ಲಿ ಪ್ರಕಟವಾಯಿತು. ಅದು ಪಾಕಿಸ್ತಾನದ ಪ್ರಶ್ನೆಗೆ ಸಂಬಂಧಿಸಿದ ಕೃತಿ. ಭಾರತ ವಿಭಜನೆಯ ಬೇಡಿಕೆ. ಅದಕ್ಕೆ ಕಾರಣಗಳು. ಅದರ ಸಾಧ್ಯತೆ ಸೂಕ್ತತೆ ಸಾಧಕಬಾಧಕಗಳು ಮುಂತಾದ ವಿಷಯಗಳನ್ನು ಕುರಿತು ಅವರು ತಮ್ಮ ಅನಿಸಿಕೆಗಳನ್ನು ಜನತೆಯ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಜನತೆಯ, ಮುಂದಿಟ್ಟು ಪಾಕಿಸ್ತಾನದ ಬೇಡಿಕೆ ಅವ್ಯಾವಹಾರಿಕವಾದುದು ಎಂಬುದನ್ನು ಮನದಟ್ಟು ಮಾಡಿಕೊಡಲು ಅವರು ಆ ಕೃತಿಯಲ್ಲಿ ಯತ್ನಿಸಿದ್ದರು. ಭಾರತ ವಿಭಜನೆಯ ಪ್ರಶ್ನೆಯನ್ನು ಕುರಿತು ದೀರ್ಘಕಾಲ ಆಳವಾಗಿ ಅಭ್ಯಾಸಮಾಡಿ ಬರೆದ ಈ ಗ್ರಂಥದಲ್ಲಿ ಶ್ರೀಯುತರು ದ್ವಿರಾಷ್ಟ್ರವಾದವನ್ನು ಅತ್ಯಂತ ತರ್ಕಬದ್ಧವಾಗಿ ತಳ್ಳಿಹಾಕಿದ್ದಾರೆ. ಹಿಂದು ಮುಸ್ಲಿಂ ಸಂಪರ್ಕ, ಬಾಂಧವ್ಯ ಮತ್ತು ಪರಸ್ಪರ ವ್ಯವಹಾರಗಳು ಹೇಗೆ ಇತಿಹಾಸದುದ್ದಕ್ಕೂ ಬೆಳೆದುಬಂದಿವೆಯೆಂಬುದನ್ನು ವಿಶದೀಕರಿಸಿದ್ದಾರೆ. ಭಾರತೀಯ ಕಲೆ, ಸಂಸ್ಕøತಿ ಮತ್ತು ನಾಗರೀಕತೆಗಳನ್ನು ಮೈಗೂಡಿಸಿಕೊಳ್ಳಲು ಮುಸ್ಲಿಂ ಆಳರಸರು ಒಂದೆಡೆಯಿಂದ ಯತ್ನಿಸಿದರೆ ಇನ್ನೊಂದೆಡೆಯಿಂದ ಹಿಂದುಗಳೂ ಮುಸ್ಲಿಂ ಕಲೆ, ಸಂಸ್ಕøತಿ ಮತ್ತು ನಾಗರೀಕತೆಗಳನ್ನು ಹೇಗೆ ಬರಮಾಡಿಕೊಂಡರೆಂಬುದನ್ನು ಉಲ್ಲೇಖಿಸಿದ್ದಾರೆ. ಮುಸ್ಲಿಂ ಪ್ರತ್ಯೇಕತಾ ಚಳವಳಿ, ಅದಕ್ಕೆ ದೊರೆತ ಉತ್ತೇಜನ, ಲಖನೌ ಒಪ್ಪಂದ, ವಹಾಬಿ-ಖಿಲಾಫತ್ ಆಂದೋಲನಗಳಲ್ಲಿಯ ತಾರತಮ್ಯ ಮೊದಲಾದವು ಭಾರತದ ವಿಭಜನೆಯ ಬೇಡಿಕೆಗೆ ಮೂಲವಾದುದೆಂಬುದನ್ನು ತೋರಿಸಿ ಕೊಟ್ಟು ಅದು ಹೇಗೆ ಅಸಮರ್ಥನೀಯವೆಂಬುದನ್ನು ಅವೈಜ್ಞಾನಿಕವೆಂಬುದನ್ನು ವಿವೇಚಿಸಿದ್ದಾರೆ. ರಾಜೇಂದ್ರಪ್ರಸಾದರ ಆತ್ಮಕಥೆ 560 ಪುಟಗಳ ಗ್ರಂಥ. ಇದು ಹಿಂದಿಯಲ್ಲಿದೆ. ಇದರಲ್ಲಿ ಲೇಖಕರ 1946ರ ವರೆಗಿನ ಜೀವನಚರಿತ್ರೆಯಿದೆ. ಇದು ತಿಳಿಯಾದ ನೇರವಾದ ಭಾಷೆಯಲ್ಲಿದೆ. 1947ರಲ್ಲಿ ಈ ಪುಸ್ತಕ ಪ್ರಕಟವಾಯಿತು. ಇಂಗ್ಲಿಷಿಗೂ ಇತರ ಕೆಲವು ಭಾರತೀಯ ಭಾಷೆಗಳಿಗೂ ಇದು ಅನುವಾದಗೊಂಡಿದೆ. ಕೇವಲ ನೆನಪಿನಿಂದ ಬರೆದ ಈ ಕೃತಿ ನಮ್ಮ ರಾಜಕೀಯ ಹೋರಾಟದ ಬಗ್ಗೆ ಕೆಲವು ಮೂಲ ಮಾಹಿತಿಗಳನ್ನು ಒದಗಿಸಬಹುದು. ಆದರೆ ಇದರಲ್ಲಿರುವುದೆಲ್ಲವನ್ನೂ ಸಪ್ರಮಾಣವಾದ ಚರಿತ್ರೆಯೆನ್ನುವಂತಿಲ್ಲವೆಂದು ಅವರು ಹೇಳಿದ್ದಾರೆ. ತಮ್ಮ ಮೇಲೆ ಶಾಶ್ವತ ಪ್ರಭಾವ ಬೀರಿದ ಸಂಗತಿ ಮತ್ತು ಘಟನೆಗಳನ್ನು ಮಾತ್ರ ವಿವರಿಸಿ ಉಳಿದವನ್ನು ತ್ಯಜಿಸಿರುವುದರಿಂದ, ಕೆಲವು ಮಹತ್ತ್ವದ ಘಟನೆಗಳು ಬಿಟ್ಟುಹೋಗಿರಬಹುದು. ಅಲ್ಲಿ ಇಲ್ಲಿ ವಸ್ತುಸ್ಥಿತಿಯ ಬಗ್ಗೆ ತಪ್ಪುಗಳಿರಬಹುದು; ಆದರೆ ಬುದ್ಧಿಪೂರ್ವಕವಾಗಿ ಯಾವುದನ್ನೂ ತಪ್ಪಾಗಿ ಹೇಳಿಲ್ಲ ಎಂದು ಬರೆದುಕೊಂಡಿದ್ದಾರೆ. ರಾಜೇಂದ್ರಪ್ರಸಾದರ ಆತ್ಮಕಥೆಗೆ ಚಾರಿತ್ರಿಕ ಮಹತ್ತ್ವವಿದೆ. ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ವಸ್ತುಸ್ಥಿತಿಗಳ ಮತ್ತು ವ್ಯಕ್ತಿಗಳ ಮೇಲೆ ಅದು ಸಾಕಷ್ಟು ಬೆಳಕು ಬೀರುತ್ತದೆ. ಅದು ಅನೇಕ ಸ್ವಾರಸ್ಯಕರ ಘಟನೆಗಳ ವಿವರಗಳನ್ನೊಳಗೊಂಡಿದೆ. ತಿಳಿಹಾಸ್ಯದಿಂದ ಕೂಡಿ ಸರಳಶೈಲಿಯಲ್ಲಿರುವ ಅದು ಉದ್ದಕ್ಕೂ ಆಕರ್ಷಕವಾಗಿದೆ. ಅವರ ಸಾತ್ತ್ವಿಕ ಮನೋಭಾವ, ಪ್ರಾಮಾಣಿಕತೆ, ಸರಳತೆ, ಹಾಗೂ ಮಾನವತೆಗಳನ್ನು ಅದು ಎತ್ತಿ ತೋರಿಸುತ್ತದೆ. ಬಹುಮಟ್ಟಿಗೆ ಗಾಂಧೀಜಿಯವರ ಸುತ್ತಲೇ ಹೆಣೆದಂತೆ ಭಾಸವಾಗುವ ಆ ಆತ್ಮಕಥೆ ರಾಜೇಂದ್ರ ಪ್ರಸಾದರು ಗಾಂಧೀಜಿಯವರ ಬಗ್ಗೆ ತಳೆದಿದ್ದ ಅಪಾರ ಪ್ರೇಮ, ವಿಶ್ವಾಸ ಮತ್ತು ಅಭಿಮಾನಗಳನ್ನು ನಿಚ್ಚಳವಾಗಿ ಮೂಡಿಸಿದೆ.

	1945ರ ಜೂನ್ 15ರಂದು ಜೈಲಿನಿಂದ ರಾಜೇಂದ್ರ ಪ್ರಸಾದರ ಬಿಡುಗಡೆಯಾಯಿತು. 1946ರ ಸೆಪ್ಟೆಂಬರ್ 2ರಂದು ದೆಹಲಿಯಲ್ಲಿ ನಡುಗಾಲ ಸರ್ಕಾರ ಅಸ್ತಿತ್ವದಲ್ಲಿ ಬಂತು. ಆ ಸರ್ಕಾರದ 12 ಮಂತ್ರಿಗಳಲ್ಲಿ ರಾಜೇಂದ್ರ ಪ್ರಸಾದರೂ ಒಬ್ಬರಾಗಿದ್ದರು. ಅವರು ಆಹಾರ ಮತ್ತು ಕೃಷಿ ಖಾತೆ ವಹಿಸಿಕೊಂಡರು. ಮಂತ್ರಿಪದವಿ ಅವರಿಗೆ ಹಿಡಿಸಲಿಲ್ಲ. ಗಾಂಧೀಜಿಯವರ ಆಗ್ರಹದಿಂದಾಗಿ ಅವರು ಮಂತ್ರಿಯಾಗಿ ಮುಂದುವರಿಯಲೇ ಬೇಕಾಯಿತು. ಮುಂದೆ ಅವರು ಭಾರತ ಸಂವಿಧಾನ ಸಭೆಯ ತಾತ್ಕಾಲಿಕ ಅಧ್ಯಕ್ಷ ಪದವಿಗೆ ಸರ್ವಾನುಮತದಿಂದ ಆಯ್ಕೆಯಾದರು. ಆಗ ಅವರು ಮಂತ್ರಿಪದವಿಯನ್ನು ಬಿಟ್ಟುಕೊಡಲು ಬಯಸಿದರು. ಆದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅದಕ್ಕೆ ಒಪ್ಪಲಿಲ.್ಲ ಹೀಗಾಗಿ ಅವರ ಹೊಣೆ ದ್ವಿಗುಣವಾಯಿತು. ಆದರೂ ಅವರು ಸಭೆಯ ಕಾರ್ಯಕಲಾಪಗಳನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಸುಗಮವಾಗಿ, ಯಶಸ್ವಿಯಾಗಿ ನಡೆಸಿದರು. ಎರಡು ವರ್ಷಗಳ ಅನಂತರ ಅವರು ಮಂತ್ರಿಪದವಿಯನ್ನು ಬಿಟ್ಟುಕೊಟ್ಟು ಸಂವಿಧಾನ ಸಭೆಯ ಪೂರ್ಣ ವೇಳೆಯ ಅಧ್ಯಕ್ಷರಾದರು. ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದಾಗ ಅವರು ಎಲ್ಲ ಸದಸ್ಯರ ಸ್ವಾತಂತ್ರ್ಯವನ್ನೂ ಮತ್ತು ಸಭಾಗೌರವವನ್ನು ಕಾಪಾಡಿಕೊಂಡು ಬಂದು ಎಲ್ಲರ ವಿಶ್ವಾಸ ಗೌರವಗಳಿಗೆ ಪಾತ್ರರಾದರು. ಸಂವಿಧಾನದ ರಚನೆಯಲ್ಲಿ ಅವರು ಪಾತ್ರ ಮಹತ್ತ್ವದಾಗಿತ್ತು. 1950ರ ಜನವರಿ 26ರಂದು ಹೊಸ ಸಂವಿಧಾನ ಕಾರ್ಯರೂಪಕ್ಕೆ ಬಂದಿತು. ಭಾರತ ಗಣರಾಜ್ಯದ ಪ್ರಥಮ ರಾಷ್ಟ್ರಪತಿಯ ಸ್ಥಾನಕ್ಕೆ ರಾಜೇಂದ್ರ ಪ್ರಸಾದರು ಆಯ್ಕೆಯಾದರು. ರಾಷ್ಟ್ರಪತಿಯಾಗಿದ್ದಾಗಲೂ ಅವರ ಜೀವನ ಸರಳವಾಗಿತ್ತು. ಒಳ ಆಡಂಬರಗಳಿಗೆ ಅವರು ಎಂದೂ ಮಾರುಹೋಗಲಿಲ್ಲ. ರಾಷ್ಟ್ರಪತಿಯ ಹುದ್ದೆಯ ಸ್ಥಾನಮಾನಗಳ ಪೂರ್ಣ ಅರಿವಿದ್ದ ಅವರು ಅವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರು. ರಾಷ್ಟ್ರೀಯ ನೀತಿಗಳ ಮೇಲೆ ತಮ್ಮ ಪ್ರಭಾವವನ್ನು ರಂಪವಿಲ್ಲದೆ ಬೀರಲು ಯತ್ನಿಸಿದರು. ಅವರಿಗೂ ಆಗ ಪ್ರಧಾನಿಯದಾಗಿದ್ದ ನೆಹರೂ ಅವರಿಗೂ ನಡುವೆ ಒಮ್ಮೊಮ್ಮೆ ಭಿನ್ನಾಭಿಪ್ರಾಯಗಳಿರುತ್ತಿದ್ದುವು. ವಿಭಿನ್ನ ಹಿನ್ನೆಲೆಗಳಿಂದ ಬಂದಿದ್ದ ಅವರಿಬ್ಬರ ದೃಷ್ಟಿಕೋನಗಳೂ ವಿಭಿನ್ನವಾಗಿದ್ದುದು ಸಹಜವೇ ಆಗಿತ್ತು. ಆದರೆ ಒಟ್ಟಿನಲ್ಲಿ ರಾಷ್ಟ್ರಹಿತ ದೃಷ್ಟಿಯಿಂದ ಇಬ್ಬರೂ ಹೊಂದಿಕೊಂಡು ನಡೆದರು. ಅನೇಕ ಶತಮಾನಗಳಿಂದ ಸಮಗ್ರವಾಗಿದ್ದ ಗ್ರಾಮಜೀವನ ವ್ಯವಸ್ಥೆ ಕೈಗಾರಿಕಾಕರಣದಿಂದ ಅಸ್ತವ್ಯಸ್ತಗೊಂಡಿದೆಯೆಂದು ಅವರು ಭಾವಿಸಿದ್ದರು. ಗಾಂಧೀಜಿಯವರ ತತ್ತ್ವಗಳ ಮೇಲೆ ಅದರ ಪುನವ್ರ್ಯವಸ್ಥೆಯಾಗಬೇಕು. ಮಾನವನ ಅವಶ್ಯಕತೆಗಳು ಮತ್ತು ಸಂಗ್ರಹಣಶೀಲತೆ ಇವು ಆತ್ಮಸಂಯಮದ ಮೂಲಕ ನಿಯಂತ್ರಿತವಾಗಬೇಕು. ವ್ಯವಸಾಯೋತ್ಪಾದನೆ ಅಧಿಕವಾಗಬೇಕು. ಗ್ರಾಮ ಕೈಗಾರಿಕೆಗಳ ಪುರುಜ್ಜೀವನವಾಗಬೇಕು. ಅವು ವಿಸ್ತøತವಾಗಬೇಕು. ಪುರಾತನ ಸಾಹಚರ್ಯ ಮನೋಭಾವ ಮತ್ತೆ ಜನರಲ್ಲಿ ಮೂಡಬೇಕು. ಪುರಾತನ ಸಾಹಚರ್ಯ ಮನೋಭಾವ ಮತ್ತೆ ಜನರಲ್ಲಿ ಮೂಡಬೇಕು. ಹೀಗೆಲ್ಲ ಅವರು ಬಯಸಿದ್ದರು. ಆದರೆ ಕೈಗಾರಿಕಾಕರಣದ ಆಕರ್ಷಣೆಯನ್ನು ತಡೆಗಟ್ಟುವುದು ದೇಶಕ್ಕೆ ಅಸಾಧ್ಯವಾಗಿತ್ತು. ಇದರಿಂದ ಅವರು ಅಸಂತುಷ್ಟರಾಗಿದ್ದರು. 1960ರಲ್ಲಿ ಅವರು ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾಗಬೇಕೆನ್ನುವ ಇಚ್ಛೆಯನ್ನು ಪ್ರಕಟಿಸಿದರು. ಅವರು ಮೂರನೆಯ ಅವಧಿಗೂ ರಾಷ್ಟ್ರಪತಿಗಳಾಗಿ ಮುಂದುವರಿಯಬೇಕೆಂದು ಬಯಸುತ್ತಿದ್ದ ಅನೇಕರಿಗೆ ಇದರಿಂದ ನಿರಾಶೆಯಾಯಿತು. ರಾಜೇಂದ್ರ ಪ್ರಸಾದರು ರಾಷ್ಟ್ರಪತಿಯಾಗಿ ಮುಂದುವರಿಯಬೇಕೆಂದು ಅವರು ಒತ್ತಾಯಿಸಿದರು. ಆದರೆ ಅವರ ನಿಶ್ಚಯ ದೃಢವಾಗಿತ್ತು. 1962ರ ಮೇ 8ರಂದು ಅವರು ನಿವೃತ್ತರಾದರು. ಅದೇ ತಿಂಗಳು 13ರಂದು ಭಾರತ ಸರ್ಕಾರ ಇವರನ್ನು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಅದೇ ವರ್ಷ ಸೆಪ್ಟೆಂಬರಿನ ಆದಿಯಲ್ಲಿ ಅವರ ಪತ್ನಿ ದೈವಾಧೀನರಾದರು.

	ರಾಜೇಂದ್ರ ಪ್ರಸಾದರ ಕೊನೆಯ ದಿನಗಳು ಅವರಿಗೆ ತಾಪದಾಯಕವಾಗಿದ್ದವು. ಭಾರತದ ಗಡಿಯ ಮೇಲೆ ಚೀನ ನಡೆಸಿದ ಆಕ್ರಮಣ ರಾಜೇಂದ್ರ ಪ್ರಸಾದರ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಉಂಟುಮಾಡಿತು. 1963ರ ಫೆಬ್ರುವರಿ 28ರಂದು ಸದಾಕತ್ ಆಶ್ರಮದಲ್ಲಿ ಅವರು ತೀರಿಕೊಂಡರು.

	ರಾಜೇಂದ್ರ ಪ್ರಸಾದರು ಭಾರತದ ಅಗ್ರಗಣ್ಯ ವ್ಯಕ್ತಿಗಳಲ್ಲೊಬ್ಬರು. ಅವರು ಜೀವಮಾನದಲ್ಲಿ ಅನೇಕ ಸ್ಥಾನಮಾನಗಳನ್ನು ಪಡೆದರಾದರೂ ಯಾವುದೊಂದಕ್ಕೂ ಅವರು ಕೈಚಾಚಿದವರಲ್ಲ. ಅವೆಲ್ಲವೂ ತಾವಾಗಿಯೇ ಅವರಿಗೆ ಬಂದುವು. ಅವರು ತಮ್ಮ ಜೀವನವನ್ನು ದೇಶಸೇವೆಗಾಗಿ ನಿಸ್ವಾರ್ಥ ಬುದ್ಧಿಯಿಂದ ಮುಡಿಪಾಗಿಟ್ಟವರು. ಪ್ರಸಾದರು ನಿಷ್ಕಲ್ಮಷ ಹೃದಯ ಮತ್ತು ಉದಾರ ಮನೋಭಾವದವರಾಗಿದ್ದರು. ನ್ಯಾಯವಾದಿಯ ವೃತ್ತಿಯಲ್ಲಿದ್ದಾಗ ಎದುರಾಳಿಗಳಿಗೆ ಸಹಾಯಕವಾಗುವಂಥ ಹಿಂದಿನ ತೀರ್ಮಾನಗಳನ್ನು ಉದಾಹರಿಸುವ ದೊಡ್ಡ ಮನಸ್ಸು ಅವರಲ್ಲಿತ್ತು. ಒಡನೆಯೇ ಅಂಥ ತೀರ್ಮಾನಗಳಲ್ಲಿದ್ದಿರಬಹುದಾದ ತಪ್ಪುಗಳನ್ನು ತೋರಿಸಿ ಪ್ರಕರಣಗಳನ್ನು ಗೆಲ್ಲುವ ಚಾಣಾಕ್ಷತೆಯೂ ಅವರಲ್ಲಿತ್ತು. ಅವರು ಕೆಲವು ನ್ಯಾಯವಾದಿಗಳಂತೆ ನ್ಯಾಯಾಧೀಶರನ್ನು ಅವರ ಕೋಣೆಗಳಲ್ಲಿ ಎಂದೂ ಭೇಟಿ ಮಾಡುತ್ತಿರಲಿಲ್ಲ. ಒಟ್ಟಿನಲ್ಲಿ ಅವರು ತಮ್ಮ ಜೀವಮಾನದಲ್ಲಿ ಒಬ್ಬ ಆದರ್ಶವ್ಯಕ್ತಿಯಾಗಿ ಅಜಾತಶತ್ರುವಾಗಿ ಬಾಳಿದರು ಭಾರತದ, ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯದ, ಇತಿಹಾಸದಲ್ಲಿ ಅವರು ಹೆಸರು ಶಾಶ್ವತವಾದ್ದಾಗಿದೆ. ಹೊಸಸಮಾಜದಲ್ಲಿ ಹೊಸ ಮನುಷ್ಯನ ನಿರ್ಮಾಣದ ಗಾಂಧೀಜಿಯವರ ಭವ್ಯ ಆದರ್ಶವನ್ನು ಬಲವಾಗಿ ನಂಬಿದ್ದವರಲ್ಲಿ ಬಾಬು ರಾಜೇಂದ್ರಪ್ರಸಾದರೂ ಒಬ್ಬರು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ